ಮಾಂಟೆಸೋರಿ, ಮಾರಿಯಾ
1870-1952 ಇಟಲಿಯ ವೈದ್ಯೆ ಮತ್ತು ಶಿಕ್ಷಣತಜ್ಞೆ, ಮಕ್ಕಳಿಗೆ ಪ್ರಾಥಮಿಕ ಪೂರ್ವ ಶಿಕ್ಷಣದಲ್ಲಿ ಮಾಂಟೆಸೋರಿ ಶಿಕ್ಷಣ ಕ್ರಮವನ್ನು ರೂಪಿಸಿದ ಪ್ರವರ್ತಕಿ.  ರೋಮ್ ವಿಶ್ವವಿದ್ಯಾಲಯದಲ್ಲಿ ಓದಿದ ಈಕೆ ಅಲ್ಲಿಯ ಮೊತ್ತ ಮೊದಲ ಮಹಿಳಾ ವೈದ್ಯ ಪದವಿ ಪಡೆದವಳು (1804). ಶಿಕ್ಷಣದಲ್ಲಿ ಆಸಕ್ತಿ ಇದ್ದ ಈಕೆ ಮನೋರೋಗ ಚಿಕಿತ್ಸಾಲಯವೊಂದರಲ್ಲಿ ಸಹಾಯಕಿಯಾಗಿ ಕೆಲಸಮಾಡಿ ಮನೋರೋಗ ಚಿಕಿತ್ಸೆ ಹಾಗೂ ಶಿಕ್ಷಣಶಾಸ್ತ್ರವನ್ನು ಅಭ್ಯಸಿಸಿದಳು.  ದುರ್ಬಲ ಮನಸ್ಸಿನ ಹಾಗೂ ಅಂಗವಿಕಲ ಮಕ್ಕಳ ಶಾಲೆಯನ್ನು ಸ್ಥಾಪಿಸಿ (1898) ಅದರ ಮುಖ್ಯಸ್ಥೆಯಾಗಿ ಕೆಲಸಮಾಡಿದಳು.  ಅಲ್ಲಿ ಈಕೆ ಏಡ್ವಾರ್ ಸೇಗ್ವಿನ್ (1812-80) ಅವರ ಶಿಕ್ಷಣತತ್ತ್ವವನ್ನು ಯಶಸ್ವಿಯಾಗಿ ಜಾರಿಗೆ ತಂದುದಲ್ಲದೆ ಸಾಮಾನ್ಯ ಮಕ್ಕಳಿಗೂ ಈ ವಿಧದ ಶಿಕ್ಷಣವನ್ನೇ ನೀಡಬೇಕೆಂದು ಸಂಕಲ್ಪಿಸಿದಳು.  1900-07ರ ತನಕ ರೋಮ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಶಾಸ್ತ್ರದ ಅಧ್ಯಾಪಕಿಯಾಗಿಯೂ ದುಡಿದಳು.  1907ರಲ್ಲಿ ರೋಮಿನ ಕೊಳಚೆ ಪ್ರದೇಶಗಳಲ್ಲಿ ಮೊತ್ತ ಮೊದಲನ ಮಾಂಟಿಸೋರಿ ಇನ್‍ಸ್ಟಿಟ್ಯೂಟ್‍ಗೂ 1919ರಲ್ಲಿ ಲಂಡನ್ನಿನ ಟ್ರೈನಿಂಗ್ ಸೆಂಟರ್‍ಗೂ ನಿರ್ದೇಶಕಿಯಾದಳು. 1922ರಲ್ಲಿ ಇಟಲಿಯ ಸರ್ಕಾರೀ ಶಾಲೆಗಳ ಇನ್‍ಸ್ಪೆಕ್ಟರ್ ಆಗಿ ನೇಮಕಗೊಂಡಳು. 1938ರಲ್ಲಿ ನೆದರ್‍ಲ್ಯಾಂಡಿನ ಲಾರೆನ್ ಮಾಂಟೆಸೋರಿ ಟ್ರೈನಿಂಗ್ ಇನ್‍ಸ್ಟಿಟ್ಯೂಟ್ ಅನ್ನು ತೆರೆದಳು.

ದಿ ಮಾಂಟೆಸೋರಿ ಮೆತೆಡ್ (1912), ಪೆಡಗಾಗಿಕಲ್ ಆಂತ್ರೊಪಾಲಜಿ (1913).  ಅಡ್ವಾನ್ಸ್ಡ್ ಮಾಂಟೆಸೋರಿ ಮೆತೆಡ್ (1917).  ದಿ ಚೈಲ್ಡ್ ಇನ್ ದಿ ಚರ್ಚ್ ಇವು ಈಕೆಯ ಕೃತಿಗಳು.

ಮಾಂಟೆಸೋರಿ ಪ್ರಯೋಗ:  ಮಂದಬುದ್ಧಿಯ ಮಕ್ಕಳ ಶಿಕ್ಷಣದಲ್ಲಿ ಆಸಕ್ತಿ ತಳೆದಿದ್ದ ಈಕೆ ಪ್ರತಿಯೊಬ್ಬ ಮಗುವಿಗೂ ವೈಯಕ್ತಿಕ ಗಮನವಿತ್ತು.  ವಿಶೇಷರೀತಿಯ ಬೋಧನ ಕ್ರಮದಿಂದ ಅವರಲ್ಲಿ ಉತ್ತಮ ಫಲಿತಾಂಶ ಬರುವಂತೆ ಮಾಡಿದಳು.  ಈ ತತ್ತ್ವವನ್ನು ಸಾಮಾನ್ಯ ಹಾಗೂ ಉನ್ನತ ಮಟ್ಟದ ಬುದ್ಧಿಶಕ್ತಿಯ ಮಕ್ಕಳಿಗೂ ಬಳಸಿದಾಗ ಅವರಲ್ಲಿಯೂ ಮೊದಲಿಗಿಂತ ಉತ್ತಮವಾದ ಫಲಿತಾಂಶ ಕಂಡ ಈಕೆ ತನ್ನ ನೂತನ ಸಿದ್ಧಾಂತವನ್ನು ದೇಶಾದ್ಯಂತ ಪ್ರಚಾರಕ್ಕೆ ತಂದಳು.  ವೈಯಕ್ತಿಕ ಗಮನ ಹಾಗೂ ವಿಶೇಷ ರೀತಿಯ ಬೋಧನ ಕ್ರಮಗಳಿಂದ ಮಕ್ಕಳ ಶಿಕ್ಷಣ ಉತ್ತಮಗೊಳ್ಳುವುದೆಂಬ ತತ್ತ್ವಕ್ಕೆ ಇಟಲಿಯ ಸರ್ಕಾರದ ಮನ್ನಣೆ ದೊರಕಿತು. 3-5 ವರ್ಷದ ಮಕ್ಕಳಂತೆ ಪ್ರಾಥಮಿಕ ವಯೋಮಾನದ ಮಕ್ಕಳಿಗೂ ಇದು ಅನ್ವಯಿಸುವುದೆಂದು ತಿಳಿದು ಪ್ರಚಾರಕ್ಕೆ ತರಲಾಯಿತು.

ಶಿಕ್ಷಣ ಕ್ಷೇತ್ರದಲ್ಲಿ ತರಗತಿಯ ವ್ಯವಸ್ಥೆ ಎಲ್ಲ ದೇಶಗಳಲ್ಲೂ ಹಿಂದಿನಿಂದ ಪ್ರಚಾರದಲ್ಲಿದೆ.  ಇಡೀ ತರಗತಿಗೆ ಸಾಮೂಹಿಕವಾಗಿ ಬೋಧಿಸುವಾಗ ಪ್ರತಿಯೊಬ್ಬ ಮಗುವಿಗೂ ಅದರ ಶಕ್ತಿ, ಆಸಕ್ತಿ ಅಭಿರುಚಿಗಳಿಗೆ ತಕ್ಕಂತೆ ಬೋಧಿಸಲು ಆಗದೆಂದು ತಿಳಿದ ಈಕೆ ತರಗತಿಯ ವ್ಯವಸ್ಥೆಗೆ ತಿಲಾಂಜಲಿ ಕೊಟ್ಟು ಒಬ್ಬೊಬ್ಬ ವಿದ್ಯಾರ್ಥಿಗೂ ಒಂದೊಂದು ತರಗತಿ ಎಂಬ ತತ್ತ್ವವನ್ನು ಪ್ರಚಾರಕ್ಕೆ ತಂದಳು.  ಸರ್ಕಾರ ಈಕೆಯ ಸಲಹೆಗಳನ್ನು ಪುರಸ್ಕರಿಸಿ ಅಂಥ ಶಾಲೆಗಳನ್ನು ದೇಶಾದ್ಯಂತ ಆರಂಭಿಸಲು ಏರ್ಪಾಟು ಮಾಡಿತು.  ಬಲುಬೇಗ ಈ ಕ್ರಮ ಇಂಗ್ಲೆಂಡಿಗೂ ಅನಂತರ ಅಮೆರಿಕಕ್ಕೂ ಹರಡಿತು.  ಆದರೆ ಕಾಲಕ್ರಮೇಣ ಇದರ ಬಗ್ಗೆ ಆಸಕ್ತಿ ಕಡಿಮೆಯಾಗಿ ಫ್ರೊಬೆಲ್ಲನ ಕಿಂಡರ್‍ಗಾರ್ಟನ್ ಶಾಲೆಗೆ ಒಲವು ಮೂಡಿತು.

ಮಾಂಟೆಸೋರಿ ಶಾಲೆಯಲ್ಲಿ ಶಿಕ್ಷಣದ ಸ್ವರೂಪ: ಮಾಂಟೆಸೋರಿ ಶಾಲೆಯಲ್ಲಿ ಶಿಕ್ಷಣ ಮೂರು ಮುಖಗಳಲ್ಲಿ ವ್ಯವಸ್ಥೆಯಾಗಿದೆ.  ಮಕ್ಕಳ ಸಮಾಜಜೀವನಕ್ಕೆ ಅಗತ್ಯವಾದ ಅನುಭವ, ಜ್ಞಾನ ಮತ್ತು ಮನೋಭಾವಗಳನ್ನು ರೂಢಿಸುವುದು ಮೊದಲ ಮುಖ; ಎಲ್ಲ ರೀತಿಯ ಶಿಕ್ಷಣ ಸಾಧನೆಗೂ ಆಧಾರವೆನಿಸಿರುವ ಇಂದ್ರಿಯಗಳ ಪಟುತ್ವವನ್ನು ಹೆಚ್ಚಿಸುವುದು ಎರಡನೆಯ ಮುಖ; ವಿಶಿಷ್ಟ ರೀತಿಯ ಆಟಿಕೆಗಳ (ಮಾಂಟೆಸೋರಿ ಗಿಫ್ಟ್ಸ್) ಮೂಲಕ ಮಕ್ಕಳೇ ಸ್ವಯಂ ಶಿಕ್ಷಣ ಪಡೆಯುವಂತೆ ಮಾಡುವುದು ಮೂರನೆಯ ಮುಖ.  ಈ ಒಂದೊಂದು ಮುಖದ ಶಿಕ್ಷಣಕ್ಕೂ ಯುಕ್ತರೀತಿಯ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ಶಿಕ್ಷಣ ಪದ್ಧತಿಯಲ್ಲಿ ಆಟದ ಸ್ಥಾನ:  ಮಕ್ಕಳ ಮೊದಲೆರಡು ವರ್ಷಗಳ ಅನಂತರ 5ನೆಯ ವರ್ಷದ ತನಕ ಅವರ ಅಂತರಂಗದಿಂದ ಶಿಕ್ಷಣ ಹೊರಹೊಮ್ಮುವುದೆಂದೂ ಅನಂತರ ಹೊರಗಿನಿಂದ ಒಳಹೋಗುವುದೆಂದೂ ಮಾಂಟೆಸೋರಿ ನಂಬಿದ್ದಳು.  ಆದ್ದರಿಂದ  ಆಗ ಓದುಬರೆಹ ಕಲಿಸಲು ಅಷ್ಟಾಗಿ ಅವಕಾಶ ಕಲ್ಪಿಸಲಿಲ್ಲ.  ಹಾಗೂ ಮಾಂಸಖಂಡಗಳ ಮೇಲೆ ಹಿಡಿತ ವರ್ಧಿಸಿದಂತೆ ಬರೆವಣಿಗೆ ಕಲಿಸಬಹುದೆಂದೂ ಅದು ಓದುವುದಕ್ಕಿಂತ ಸುಲಭವಾದ್ದರಿಂದ ಮೊದಲು ಬರೆಯುವುದನ್ನು ಆರಂಭಿಸಬಹುದೆಂದೂ ಭಾವಿಸಿದ್ದಳು.  ಈಕೆ ಆಟಕ್ಕೆ ಪ್ರಾಶಸ್ತ್ಯವಿತ್ತರೂ ಮಕ್ಕಳು ಆಟಿಕೆಗಳ ಮೂಲಕ ಶಿಕ್ಷಣ ಪಡೆಯುವ ಅಗತ್ಯವನ್ನೂ ಸೇರಿಸಿದ್ದಳು. ಮಕ್ಕಳ ಮುಂದಿನ ಜೀವನವಿಕಾಸಕ್ಕೆ ಅಗತ್ಯವಾದ ಕಲ್ಪನಾಶಕ್ತಿಯ ಬೆಳೆವಣಿಗೆಗೂ ಅವಕಾಶ ಕಲ್ಪಿಸಿದ್ದಳು.  ಬರಿ ಪೌರಾಣಿ ಕಥೆಗಳನ್ನು ಹೇಳುವ ಬದಲು ವಿಜ್ಞಾನ, ಪ್ರವಾಸ, ಉದ್ಯೋಗ ಮುಂತಾದ ವಾಸ್ತವ ರೀತಿಯ ಅದ್ಭುತಾದ್ಭುತಗಳನ್ನು ಬಳಸಬಹುದೆಂದು ಸೂಚಿಸಿದ್ದಳು.

ಟೀಕೆಗಳು: ಮಕ್ಕಳ ಶೈಕ್ಷಣಿಕ ಜೀವನದಲ್ಲಿ ಪ್ರಾಥಮಿಕಪೂರ್ವದ ಶಿಕ್ಷಣದ ಪ್ರಾಮುಖ್ಯವನ್ನು ಎಲ್ಲರೂ ಒಪ್ಪಿದರೂ ಇಂದ್ರಿಯಪಟುತ್ವವನ್ನು ಹೆಚ್ಚಿಸುವುದೇ ಶಿಕ್ಷಣ ಎಂಬುದನ್ನು ಅನೇಕರು ಒಪ್ಪುವುದಿಲ್ಲ.  ಮೇಲಾಗಿ ಜನ್ಮಗತವಾಗಿ ಬಂದಿರುವ ಇಂದ್ರಿಯಗಳ ಪಟುತ್ವವನ್ನು ಹೆಚ್ಚಿಸುವುದು ಸಾಧ್ಯವೇ ಎಂದು ಅನುಮಾನಪಡುವುದೂ ಉಂಟು.

ಈ ಶತಮಾನದ ಆರಂಭದಲ್ಲಿ ಹೆಚ್ಚು ಪ್ರಚಾರದಲ್ಲಿದ್ದ ಈ ಶಿಕ್ಷಣಪದ್ಧತಿ ಈಗ ಅಷ್ಟಾಗಿ ಕಾಣಬರುತ್ತಿಲ್ಲ.  ಮಾರ್ಗರೆಟ್ ಮ್ಯಾಕ್ಮಿಲನ್ನರ ನರ್ಸರಿ ಶಿಕ್ಷಣಪದ್ಧತಿ ಹಾಗೂ ಫ್ರೊಬೆಲ್ಲನ ಕಿಂಡರ್‍ಗಾರ್ಟನ್ ಶಿಕ್ಷಣಪದ್ಧತಿ ಹೆಚ್ಚು ಪ್ರಚಾರದಲ್ಲಿವೆ.
ಮಾಂಟೆಸೋರಿಯವರು ಭಾರತದಲ್ಲೂ ನೆಲಸಿದ್ದು ತಮ್ಮ ಶಿಕ್ಷಣಪದ್ಧತಿಯನ್ನು ಪ್ರಚಾರಮಾಡಿದರು.  ಮದ್ರಾಸಿನ ಅಡ್ಯಾರ್‍ನಲ್ಲಿ ಒಂದು ಶಾಲೆಯನ್ನು ಸ್ಥಾಪಿಸಿ ನಡೆಸಿದರು.						
(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ